ರತ್ನನ್ ಪರ್ಪಂಚ
ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!
ಅಗಲೆಲ್ಲ ಬೆವರ್ ಅರ್ಸಿ
ತಂದದ್ರಲ್ಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ ;
ಯೀರ‍್ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ ತುಂಭೋಯ್ತು ರತ್ನನ್ ಪರ್ಪಂಚ !
ಏನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರಪಂಚದ್ ಅಂಚ ;
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ ಇಗ್ಗೋದು ರತ್ನನ್ ಪರ್ಪಂಚ !
ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ನಾವಾಗಿ ಬಾಳೋದು ರತ್ನನ್ ಪರ್ಪಂಚ !
ಬಡತನ ಗಿಡತನ
ಏನಿದ್ರೇನ್ ?
ನಡತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ !
ಅಂದ್ಕೊಂಡಿ ಸುಕವಾಗಿ
ಕಸ್ಟಕ್ ನೆಗಮೊಕವಾಗಿ ನೆಗೆಯೋದೆ ರತ್ನನ್ ಪರ್ಪಂಚ !
ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ ನಾವೆಲ್ಲ ಔನೀಗೆ ಬಚ್ಛ !
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಕೊಂಡ್ ಯೇಳ್ದಂಗೆ ಕುಣಿಯಾದೆ ರತ್ನನ್ ಪರ್ಪಂಚ!
